ಇದೊಂದು ಹೆಮ್ಮರ. ಹಿಂದೂ ಧರ್ಮೀಯರು ಇದನ್ನು ಪವಿತ್ರವಾದ ಮರವೆಂದು ಪುಜೆ ಮಾಡುವರು. ನೆರಳಿಗಾಗಿಯೂ ಬೆಳೆಸಬಹುದು. ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ. ಕೆಲವು ಜಾತಿಯ ಅರಗಿನ ಹುಳುಗಳನ್ನು ಬೆಳೆಸುವುದಕ್ಕೂ ಇವುಗಳ ಉಪಯೋಗವಿದೆ. ಎಲೆಯನ್ನು ದನಕರು, ಆಡು, ಕುರಿಗಳಿಗೆ ಮೇವಾಗಿ ಬಳಸುತ್ತಾರೆ. ಇವುಗಳ ಹಾಲಿನಲ್ಲಿರುವ ಜಿಗುಟಾದ ದ್ರವದಿಂದ ರಬ್ಬರನ್ನು ಮಾಡಬಹುದು. ಅರಳಿಮರವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ